ತಂತುಕ
ಹೆಪ್ಪುಗಟ್ಟಿದ ರಕ್ತದಲ್ಲಿ ಬಲೆಯ ರೂಪದಲ್ಲಿ ಹೆಣೆದುಕೊಂಡಿರುವ, ಅದರ ಬೃಹದಣುನಾರಿನಂತೆ ತೋರುವ ಒಂದು ಪ್ರೋಟೀನ್ (ಫೈಬ್ರಿನ್). ಇದು ನೀರಿನಲ್ಲಿ ವಿಲೀನವಾಗುವುದಿಲ್ಲ. ಇದರ ಜನಕವಸ್ತು ರಕ್ತದಲ್ಲಿ ಹಾಗೂ ನೀರಿನಲ್ಲಿ ವಿಲೀನವಾಗಬಲ್ಲ ಫೈಬ್ರಿನೊಜನ್ ಎಂಬ ಇನ್ನೊಂದು ಪ್ರೋಟೀನ್ (ಅಣುತೂಕ 330.000). ಫೈಬ್ರಿನೋಜನ್ನಿನಿಂದ ಫೈಬ್ರಿನ್ನಿನ ಉತ್ಪತ್ತಿಗೆ ರಕ್ತದಲ್ಲಿರುವ ಪ್ರೋಥ್ರಾಂಬಿನ್ ಜನ್ಯವಾದ ಥ್ರಾಂಬಿನ್ ಎಂಬ ಕಿಣ್ವ ಅವಶ್ಯಕ. ಥ್ರಾಂಬಿನ್ ಕಿಣ್ವ ಫೈಬ್ರಿನೊಜನ್ನಿನಲ್ಲಿರುವ ಆರ್ಜಿನೀನ್ ಅಮೈನೋ ಆಮ್ಲದಿಂದಾದ ಪೆಪ್ಟೈಡ್ ಬಂಧಗಳನ್ನು ಒಡೆದು ಅನುಕ್ರಮವಾಗಿ 18 ಮತ್ತು 20 ಅಮೈನೋ ಆಮ್ಲಗಳನ್ನು ಹೊಂದಿದೆ.  A   ಮತ್ತು  B ಫೈಬ್ರಿನೊಪೆಪ್ಟೈಡುಗಳನ್ನೂ ಸಯಾಲಿಕ್ ಆಮ್ಲ ಮತ್ತು ಕಾರ್ಬೊಹೈಡ್ರೇಟುಗಳನ್ನೂ ಬಿಡುಗಡೆ ಮಾಡಿ ಫೈಬ್ರಿನೊಜನ್ನನ್ನು ತಂತುಕವಾಗಿ ಪರಿವರ್ತಿಸುತ್ತದೆ. ಹೀಗೆ ಉತ್ಪತ್ತಿ ಆದ ತಂತುಕದ ಬೃಹದಣುಗಳು ಶೀಘ್ರದಲ್ಲೇ ಒಂದು ಬೃಹದಣುವಿನ ತುದಿ ಇನ್ನೊಂದರ ತುದಿಗೆ ಸೇರಿ ತಂತಿರೂಪ ಪಡೆಯುತ್ತವೆ. ಅನಂತರ ಈ ತಂತಿಗಳು ಪಕ್ಕದ ತಂತಿಗಳನ್ನು ಸೇರಿ ತಂತುಕದ ಬಹು ಬೃಹದಣುಗಳಾಗುವುವು (ಫೈಬ್ರಿನ್ ಪಾಲಿಮರ್). ಇವು ಬಲೆಯಂತೆ ಹೆಣೆದುಕೊಳ್ಳುತ್ತವೆ. ಈ ಬಲೆಯಲ್ಲಿ ರಕ್ತಕಣಗಳು ಸಿಕ್ಕಿ ಬಿದ್ದು ರಕ್ತದ ಮೆದುಗಡ್ಡೆಯಾಗುವುದು (ಕೊಯಾಗ್ಯುಲಮ್). ಇದನ್ನು Pಊ 8ರ ಆಮ್ಲತೆಯಲ್ಲಿ ಯೂರಿಯಾ ದ್ರಾವಣದಲ್ಲಿ ವಿಲೀನಗೊಳಿಸಬಹುದು. ಮೆದುಗಡ್ಡೆ ಗಟ್ಟಿಯಾಗಲು ಕ್ಯಾಲ್ಸಿಯಮ್ ಲವಣವೂ ದೃಢಗೊಳಿಸುವ ಅಂಶವಾದ (ಫೈಬ್ರಿನ್ ಸ್ಟೇಬಿಲೈಸರ್) ಫೈಬ್ರಿನೇಸ್ ಎಂಬ ಕಿಣ್ವವೂ ಬೇಕು. ಇದು ತಂತುಕದ ಅಣುವಿನ ರಚನೆಯನ್ನು ಬದಲಾಯಿಸಿ ಅದರಲ್ಲಿನ ಗ್ಲುಟಾಮಿಕ್ ಮತ್ತು ಲೈಸೀನ್ ಅಮೈನೋ ಆಮ್ಲಗಳ ನಡುವೆ ಹೊಸ ಬಂಧವನ್ನು ಏರ್ಪಡಿಸುವುದು.

	ತಂತುಕದ ಅಣುವಿನಲ್ಲಿರುವ ಮುಖ್ಯ ಅಮೈನೋ ಆಮ್ಲಗಳು ಮತ್ತು ಅವುಗಳ ಪ್ರಮಾಣಗಳು ಹೀಗಿವೆ: ಅಸ್ಪಾರ್ಟಕ್ ಆಮ್ಲ (13%). ಗ್ಲುಟಾಮಿಕ್ ಆಮ್ಲ (14.5%). ಪ್ರತ್ಯಾಮ್ಲೀಯಗಳಾದ ಲೈಸೀನ್ (9.2%) ಮತ್ತು ಅರ್ಜಿನೀನ್ (7.8%), ಹೈಡ್ರಾಕ್ಷಿ ಆಮ್ಲಗಳಾದ ಸೀರೀನ್ (7%) ಮತ್ತು ತ್ರಿಯೊನೀನ್ (7.1%). ಇವಲ್ಲದೆ ಲ್ಯೂಸೀನ್ (7.1%) ಕೂಡ ಉಂಟು.

	ತಂತುಕದಿಂದಾದ ಈ ರೀತಿಯ ರಕ್ತಗಡ್ಡೆ ಕೆಲವು ಗಂಟೆಗಳಲ್ಲಿ ಕರಗಿ ದ್ರವವಾಗುವುದು ಸಾಧ್ಯ. ಹೀಗಾಗಲು ತಂತುಕವನ್ನು ಒಡೆಯುವ ಕಿಣ್ವ ಫೈಬ್ರಿನೋಲೈಸಿನ್ ಅಥವಾ ಪ್ಲಾಸ್ಮಿನ್ ಬೇಕು. ಇದು ರಕ್ತದಲ್ಲಿ ಪ್ಲಾಸ್ಮಿನೊಜನ್ ಎಂಬ ನಿಷ್ಕ್ರಿಯಾರೂಪದಲ್ಲಿ ಇವೆ. ರಕ್ತದ ನಾಳಗಳಿಗೆ ಗಾಯವಾದಾಗ ಪ್ಲಾಸ್ಮಿನೋಜನ್ನನ್ನು ಕ್ರಿಯಾರೂಪಕ್ಕೆ ತರುವ ಫೈಬ್ರಿಯೊಲೈಸೊಕೈನೇಸ್ (ಫೈಬ್ರೊಕೈನೇಸ್) ಎಂಬುದು ಗಾಯವಾದ ಸ್ಥಳದಲ್ಲಿ ಬಿಡುಗಡೆ ಆಗುತ್ತದೆ. ಫೈಬ್ರೊಕೈನೇಸ್ ಎಲ್ಲ ಕೋಶಗಳಿಂದ ಬಿಡುಗಡೆ ಆಗಬಹುದಾದರೂ ಫುಪ್ಪುಸದ ಕೋಶಗಳಲ್ಲಿ ಹೆಚ್ಚು ಇರುವುದು ವ್ಯಕ್ತಪಟ್ಟಿದೆ. ರಕ್ತಗಡ್ಡೆಯ ಕಾರಣದಿಂದಾಗಿ ರಕ್ತನಾಳದಲ್ಲಿ ರಕ್ತ ಹರಿಯುವುದಕ್ಕೆ ಅಡ್ಡಿಯುಂಟಾದಾಗ ಯಾವುದೋ ಅವ್ಯಕ್ತದೌತ್ಯದಿಂದ ಫೈಬ್ರೊಕೈನೇಸ್ ಫುಪ್ಪುಸದ ಕೋಶಗಳಿಂದ ಬಿಡುಗಡೆಯಾಗಿ ರಕ್ತಗಡ್ಡೆ ಕರಗುವ ಕೆಲಸ ಸಾಧ್ಯವಾಗುವುದು. ತಂತುಕದ ದ್ರವೀಕರಣ ಕ್ರಿಯೆಗೆ ಅಡ್ಡಿಯಾಗುವ ಪೆಪ್ಟೈಡುಗಳನ್ನು ಫೈಬ್ರೊಕೈನೇಸು ಪ್ಲಾಸ್ಮಿನೋಜನ್ನಿನಿಂದ ಬಿಡುಗಡೆಮಾಡಿ ಅದನ್ನುಕ್ರಿಯಾರೂಪಕ್ಕೆ ತಂದು ಪ್ಲಾಸ್ಮಿನ್ನಾಗಿ ಪರಿವರ್ತಿಸುತ್ತದೆ. ಇಂಥ ಪರಿವರ್ತನ ಸಾಮಥ್ರ್ಯ ಟ್ರಿಪ್ಸಿನ್, ಸ್ಟ್ರೆಪ್ಟೊಕೈನೇಸ್, ಯೂರೊಕೈನೇಸ್ ಮುಂತಾದವುಗಳಿಗೂ ಉಂಟು. ವ್ಯಾಯಾಮ ಮಾಡಿದಾಗಲೂ ಅಡ್ರೆನಲೀನ್ ಬಿಡುಗಡೆಯಾದಾಗಲೂ ವಸೆಯನ್ನು ಕ್ಲೋರೊಫಾರಮ್ಮಿನೊಂದಿಗೆ ಕಲಕಿದಾಗಲೂ ಪ್ಲಾಸ್ಮಿನೋಜನ್ನಿನ ಕ್ರಿಯಾರೂಪವಾದ ಪ್ಲಾಸ್ಮಿನ್ ತಯಾರಾಗುವುದು ಸಾಧ್ಯ.

	ಪೊರೆ ಅಥವಾ ಬಲೆ ರೂಪದ ತಂತುಕವನ್ನು ಮಿದುಳಿನ ಶಸ್ತ್ರಕ್ರಿಯೆಯಲ್ಲಿ ಅದರ ಹೊರಪದರದ ಬದಲಾಗಿ ಅಳವಡಿಸಲು ಉಪಯೋಗಿಸುವುದುಂಟು.					 (ಎ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ